ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Wednesday 11 April 2012

ಅನ್ವೇಷಣೆ....

ನೆಲ ಮುಗಿಲರ್ಕ ಆ ತರ್ಕಕ್ಕೆ ಹೆದರಿದ್ದವು
ಆತನಿಗು ಆತನ ಕೆತ್ತಿದಾತನಿಗೂ ಜಗಳ
ಬಡಿದಾಡಲು ಬಡಿಗೆಯಿಲ್ಲ ಗಳ
ಗುದ್ದಾಡಲು ಗುದ್ದಲಿ ಸುತ್ತಿಗೆ ಪಿಕಾಸಿ
ಅರ ಉಳಿ ಚೂರಿಯಿಲ್ಲ ಬಿಕನಾಸಿ

ಒಂದೆಕರೆ ಗುಂಡಿಯಗೆದು, ಬಂಡಿಯಲ್ಲಿ
ತುಂಬಿಕೊಂಡು ಬಂದಿದ್ದನ್ನು ಸುರಿದು
ಮೊದಲು ಎತ್ತಿಕೊಂಡ ಮಿಕ್ಸಿ
ವಿದ್ಯುತ್ ಬಲಕ್ಕೆ ಗಿರ್ರನೆ ತಿರುಗಿ
ಮಸಾಲೆ ಸಂಬಾರ ಸುರ್ರನೆ ನಜ್ಜಿ
ಬೆರೆಸುವುದು ಕಣ ಕಣ ಈ ಶೋಧನ
ಆತನ ಮೂತಿಗೆ ಹಿಡಿದು ತಿವಿದ

ಆತ ಜೋರಾಗಿ ನಕ್ಕ
ವಿದ್ಯುತ್ ನಿಂದ ಅಂದೆ, ಅದೆಲ್ಲಿದೆ??
ನಿನ್ನ ಬಾಯ ಕಾಯಕ
ಜಗಿದ ಹಲ್ಲು, ಕಿಣ್ವ ಸುರಿಸಿದ ಜೊಲ್ಲು
ಕೆಳ ಜಠರದೊಳ ಮರ್ಮ ಕದ್ದ ಮಳ್ಳ
ಬೇರೇನಾದರಿದ್ದರೆ ಹೇಳು ಕಳ್ಳ
ಇದೊಂದು ಅನ್ವೇಷಣಾ ಚೌರ್ಯ
ಒಳಕಲ್ಲು ಬಾಯಿಯೇ ಮೊದಲ ಮಿಕ್ಸಿ

ಕೋಪಗೊಂಡನಾತ, ಮಿಕ್ಸಿ ಎಸೆದ
ಕೈಗೆತ್ತಿಕೊಂಡ ಗಣಕ ಯಂತ್ರ
ಆಧುನಿಕ ಯುಗದ ಮಹಾನ್ ತಂತ್ರ
ಪಟ ಪಟ ಕುಟ್ಟಿ ಜಗತ್ತನ್ನೇ ತೋರಿ
ನಿನ್ನನ್ನು ನನ್ನನ್ನು ಎಲ್ಲರನ್ನೂ ಮೀರಿ
ಬೆಳೆದು ನಿಂತಿದ ನೋಡು ಈ ಪರಿ - ಎಂದ

ಆತನ ನಗು ನಿಲ್ಲಲಿಲ್ಲ, ಜೋರಾಯಿತು
ನಿನ್ನ ಮಗು ಗಂಡೋ ಹೆಣ್ಣು? ಎಂದ
ಹಠಾತ್ತನೆ ಆತ ಗಂಡು ಎಂದ
ನೀನ್ಯಾರೆಂದು ಅದರಲ್ಲಿ ಹೇಳಿಸು
ಆತ ಮತ್ತೆ ಕಕ್ಕಾಬಿಕ್ಕಿ, ಅತ್ತು ಬಿಟ್ಟ ಬಿಕ್ಕಿಬಿಕ್ಕಿ
ಯೋಚಿಸುವ ಶಕ್ತಿಯಿಲ್ಲವದಕ್ಕೆ
ನಿನ್ನ ಮೆದುಳು ತುಂಬಿದ್ದನ್ನೇ ಹೇಳುವುದು
ಪರಾವಲಂಬನೆಯಿಲ್ಲದೆ ಪರಾಮರ್ಶಿಸುವ
ನಾ ಕೊಟ್ಟ ಮೇದುಳೇ ಮಹಾನ್ ಗಣಕ

ಸೋಲದ ಆತ, ಹಲ್ಲು ಕಡಿಯುತ್ತ ಮುಂದಿಟ್ಟ
ಮೊನ್ನೆಯಷ್ಟೇ ತಂದಿದ್ದ ಬಣ್ಣದ ಟೀವಿ
ಅಂಗಾಂಗಗಳ ಮುಗಿದ ಚಲನ ವಲನ
ಬದುಕ ಪಯಣ ವಿವಾಹ ಮಿಲನ
ಆ ಡಬ್ಬದಲ್ಲಿ ಹಿಡಿದಿಟ್ಟಿದ್ದು ತೋರಿಸಿ
ಸೊಂಟಕ್ಕೆ ಕೈ ಸಿಕ್ಕಿಸಿ ನಿಂತ ದರ್ಪ ಸೂಸಿ

ಸಾವಧಾನವಾಗಿ ಕೇಳಿದನಾತ
ಮುಂಜಾನೆ ಬೆವೆತಿದ್ದು ಯಾಕೆ?
ರಾತ್ರಿಯ ಕೆಟ್ಟ ಕನಸ್ಸು – ಆತನುತ್ತರ
ಅದನ್ನು ನಿನ್ನ ಟೀವಿಯಲ್ಲಿ ಕಂಡೆಯಾ?
ಕನಸ್ಸಿನಿಂದ ಕಣ್ಣಿಗೆ ರಾತ್ರಿಯೆಲ್ಲ ಪ್ರದರ್ಶನ
ಕಣ್ಮುಚ್ಚಿದರೆ ಮನಸ್ಸೊತ್ತು ತರುವುದು ದೂರದರ್ಶನ - ಮುಂದುವರೆಯುವುದು...

1 comment:

  1. ಕವಿತೆ ಮುಂದುವರೆಯಿಲಿ. ಮತ್ತೊಂದಷ್ಟು ಪ್ರತಿಕ್ರಿಯಿಸುತ್ತೇನೆ.ಉತ್ತಮ ಭಾವಾವೇಶವಿದೆ ಕವಿತೆಯಲ್ಲಿ.

    ReplyDelete