ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Thursday 4 October 2012

ಹಕ್ಕಿಗೊಂದು ಗೂಡು

ಯಾಕೋ ಹೊಟ್ಟೆ ತೊಳಸಿದಂತಾಗಿ ಬಸ್ಸಿನ ಕಿಟಕಿಯನ್ನು ತೆರೆದೆ. ಒಮ್ಮೆಲೇ ಒಳ ನುಗ್ಗಿದ ಗಾಳಿಗೆ ಮೈ ಮನ ಇದ್ದಕ್ಕಿದ್ದಂತೆ ಪುಳಕಗೊಂಡಿತು. ಯಾವಾಗಲೂ ತುಂಬಿಕೊಳ್ಳುವ ಈ ಬಸ್ಸಿನಲ್ಲಿ ನನ್ನೂರಿನಿಂದ ದೂರದ ಪಟ್ಟಣಕ್ಕೆ ನೆಂಟರಿಷ್ಟರ ಮನೆಗೆ ತೆರಳುವಾಗ ಈ ಹಸಿರು ಹೊತ್ತು ಹೆಸರಿಗಲ್ಲದೇ ತಮ್ಮಷ್ಟಕ್ಕೆ ತಾವು ತಂಗಾಳಿಯನ್ನು ಬೀಸುವ ಮರಗಿಡಗಳ ಕಂಡರೆ ಇಂದೇಕೋ ಚೂರು ಹೊಟ್ಟೆ ಕಿಚ್ಚು. ಇದ್ದಕ್ಕಿದ್ದಂತೆ ಏನೋ ಸಿಡಿದಂತಹ ಶಬ್ದ
“ಟೈರ್ ಹೊಡೆದುಹೋಗಿದೆ, ಬದಲಿಸಬೇಕಾಗಿದೆ, ಎಲ್ಲರೂ ಕೆಳಗಿಳಿಯಿರಿ” ಬಸ್ಸಿನ ಕ್ಲೀನರ್ ಕೂಗಿಕೊಂಡ.

ಮತ್ತೆ ಬಂದಾಗ ಗುರುತಿಸಿಕೊಳ್ಳುವುದಕ್ಕಲ್ಲದಿದ್ದರೂ, ಬೇರೆ ಯಾರೋ ಕುಳಿತು ನನ್ನ ಜೊತೆ ಜಗಳವಾಡದಿರಲೆಂದು ತಂದಿದ್ದ ಬ್ಯಾಗನ್ನು ಸೀಟ್ ಮೇಲೆ ಇಟ್ಟು ಹೊರ ನಡೆದೆ. ಡಿಸೆಂಬರ್ ಚಳಿಯ ಜಿಟಿ ಜಿಟಿ ಹನಿಮಳೆ. ಹೊದ್ದುಕೊಂಡಿದ್ದ ಶಾಲಿನೊಳಗೆ ಕೈ ಕಾಲುಗಳು ಮರಗಟ್ಟಿ, ತೊಟ್ಟಿದ್ದ ಬಳೆಗಳು ಘಲಿಸದೇ ನಿಶ್ಶಬ್ದಗೊಂಡಿದ್ದವು. ಅಷ್ಟಗಲಕ್ಕೆ ಹರಡಿಕೊಂಡಿದ್ದ ಅಲ್ಲೇ ಇದ್ದ ಆಲದ ಮರದ ತುದಿಯಲ್ಲಿ ತೂಗಿಕೊಂಡಿದ್ದ ಗೂಡಿನಲ್ಲಿ ಇಣುಕಿದ ಅದೆಂತದೋ ಪಕ್ಷಿ ಮತ್ತದರ ಮರಿಗಳು ಚಿಲಿಪಿಲಿಗುಟ್ಟಿದವು. ಇಷ್ಟು ದೊಡ್ಡ ಮರದಲ್ಲಿರುವ ಸಾವಿರ ಸಾವಿರ ಎಲೆ, ಕೊಂಬೆ ರೆಂಬೆ, ತೂಗುಜಡೆ ಯಾವುದೂ ಆ ಪಕ್ಷಿಗೆ ಗೂಡು ಕಟ್ಟಿ, ಮೊಟ್ಟೆಯಿಟ್ಟು ಮರಿ ಮಾಡಿ, ಅದರೊಸಗೆ ನೋಡಿಕೊಳ್ಳುವುದಕ್ಕೆ ಅಡ್ಡಿ ಮಾಡಿಲ್ಲ. ಈ ಲೋಕ ಆ ಪಕ್ಷಿಗಳ ಮಿಲನ ಮೈಥುನಕ್ಕೆ ಗೆರೆಯೆಳೆದು ಮತ್ತಾವುದೋ ಪಕ್ಷಿಯನ್ನು ಗೊತ್ತಿರಿಸಿ, ನೀನು ಹೀಗೆಯೇ ಬದುಕು ಎಂದು ಕೂಡಿಸಿಲ್ಲ, ಇಷ್ಟು ದೊಡ್ಡ, ನಿಶ್ಚಲವೆನಿಸಿದರೂ ನಿಶ್ಚಲವಲ್ಲದ ಲೋಕದಲ್ಲಿ ಈ ಮರವೆಂಬುದೂ ಜೀವವಿರುವ ಒಂದು ವ್ಯವಸ್ಥೆಯಾದರೆ, ಅದರ ಕೊಂಬೆ ತುದಿಯಲ್ಲಿ ತೂಗಿದ ಪಕ್ಷಿಗೂಡು ಮತ್ತೊಂದು ವೃತ್ತ, ವೃತ್ತಾಂತ. ಮರಿಗಳೊಂದಿಗೆ ಯಾವುದೇ ಕಟ್ಟುಪಾಡುಗಳಿಗೆ ಹೊಂದಿಕೊಳ್ಳದ ಪಕ್ಷಿ ನಿಜಕ್ಕೂ ಸಮತೆಯಲ್ಲಿ ತೂಗುತ್ತಿದೆ. ಅದರ ಪಾಡಿಗದು ಯಾವುದೇ ವಕ್ರರೇಖೆಗಳಿಗೆ, ಜಾತಿ ಧರ್ಮ ಎಂಬ ಮಾನವ ನಿರ್ಮಿತ ಗೋಡೆಗಳಿಗೆ ಒಗ್ಗಿಕೊಳ್ಳದೇ ಸ್ವಚ್ಛಂದ ಜೀವನ ನಡೆಸುತ್ತಿದೆ.

“ಎಲ್ಲಾ ಹತ್ತಿ ಹತ್ತಿ ಬೇಗ” ಕ್ಲೀನರ್ ಮತ್ತೆ ಕೂಗಿಕೊಂಡ.
ನಾನು ತಂದಿದ್ದ ಬ್ಯಾಗ್‍ನ ಒಂದು ಮೂಲೆ ಚೂರು ಅದುರುತ್ತಿತ್ತು. ಅದರೊಳಗೆ ಒದರುತ್ತಿದ್ದ, ಅದುರುತ್ತಿದ್ದ ಮೊಬೈಲ್ ನೋಡಿದಾಗ ಅಮ್ಮ, ಅಪ್ಪ, ಅಣ್ಣ, ಚಿಕ್ಕಪ್ಪ ಸೇರಿ ಒಟ್ಟು ಮೂವತ್ತು ಬಾರಿ ಫೋನಾಯಿಸಿದ್ದರು.

ಶಾಮುವಿನೊಂದಿಗೆ ಸುಮಾರು ಆರು ತಿಂಗಳಿನಿಂದ ಸತತವಾಗಿ ಮಾತನಾಡಿದ್ದೇನೆ. ಕಳ್ಳನೊಬ್ಬ ಅಗುಳಿ ಜಡಿದು ಮನೆಯೊಳಗೆ ನುಗ್ಗಿದ್ದು, ಮಳೆಯಲ್ಲಿ ನೆನೆದುಕೊಂಡೇ ಓಣಿಕೊನೆಯ ಹಳ್ಳದಿಂದ ಮನೆಗೆ ನೀರು ತುಂಬಿ ಜ್ವರ ಬರಿಸಿಕೊಂಡಿದ್ದರಿಂದಲೂ ಹಿಡಿದು ಇರುವೆ ಕಚ್ಚಿದ್ದರವರೆವಿಗೂ ಹರಟಿದ್ದೇನೆ, ಆತ ಆಗಾಗ ಹೇಳುತ್ತಿದ್ದ ಹಾಸ್ಯಕ್ಕೆ ಮನಗೊಟ್ಟು ನಕ್ಕಿದ್ದೇನೆ. ಅಲಾರಂ ಇಟ್ಟುಕೊಳ್ಳದ ಆತನಿಗೆ ಮುಂಜಾನೆಯ ನನ್ನ ಕರೆಯಿಂದಲೇ ಎಚ್ಚರ. ಅರೆನಿದ್ರೆಯಿಂದ “ಪ್ಲೀಸ್ ಹತ್ತು ನಿಮಿಷ ಮಲಗುತ್ತೇನೆ ಕಣೆ” ಎಂದರೆ ಪೀಡಿಸಿ ಪೀಡಿಸಿ ಎಬ್ಬಿಸಿಬಿಡುತ್ತಿದ್ದೆ. ರಾತ್ರಿ ಬೇಗ ಮಲಗಲೊಲ್ಲದಿದ್ದವನು, ಸರಿರಾತ್ರಿ ಎರಡರವರೆವಿಗೂ ನನ್ನೊಡನೆ ಹರಟಿ ಕೊನೆಗೆ ಮೊಬೈಲ್ ಸಂದೇಶದಲ್ಲಿಯೇ ತಬ್ಬಿ ಮಲಗಿಸಿಕೊಂಡು ಬಿಡುತ್ತಿದ್ದ. ರಾತ್ರಿಯೆಲ್ಲಾ ಹೀಗೆ ಮಲಗಿರುತ್ತೇನೆ, ಗುಡ್‍ನೈಟ್ ಎಂದು ಕೊನೆಗೆ ಸಂದೇಶವೊಂದನ್ನು ಕಳುಹಿಸಿ ತನ್ನ ತುಂಟತನ ತೋರಿಸಿ ಮಲಗಿಕೊಳ್ಳುತ್ತಿದ್ದ.
ಈತನ ಸಾಮೀಪದೊಲವಿನಂದಲೇ ನಾನು ರಾಘುವನ್ನು ಸಂಪೂರ್ಣವಾಗಿ ಮರೆತೆ. ಆತನ ಜೀವನವೇ ಬೇರೆ ಇತ್ತು, ನನ್ನದೇ ಬೇರೆ ಇದೆ, ಇಷ್ಟು ದಿನದೊಂದಿಗಿನ ಆತನ ಗೆಳೆತನವೆಲ್ಲಾ ಕೇವಲ ಭ್ರಮೆ, ನಾ ನಡೆದಾಡುವ ಹಾದಿಯಲ್ಲೆಲ್ಲೋ ಆತ ಸಿಕ್ಕಿ ಮರೆಯಾಗಿಹೋಗಿದ್ದಾನಷ್ಟೇ ಎಂದುಕೊಂಡು ಆತನನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದೆ.
-
‘ಹಾಲೂ... ‘ ಎಂದ ತಕ್ಷಣ ಓಡೋಡಿ ಹೊಸ್ತಿಲ ಬಳಿ ಬಂದು ನಿಂತುಬಿಡುತ್ತಿದ್ದೆ. ರಾಘು ನಮ್ಮ ಮನೆಗೆ ಮುಂಜಾನೆಯೇ ಹಾಲು ಮಾರಲು ಬರುತ್ತಿದ್ದ ಉರಿ ಮೀಸೆಯ ಸುಂದರಾಂಗ. ಜೊತೆಗೆ ಪೇಪರ್ ಕೂಡ ಹಂಚುತ್ತಿದ್ದ ರಾಘು ಕಷ್ಟಪಟ್ಟು ಓದಿಕೊಂಡಿದ್ದ. ಶಾಲಾ ದಿನಗಳಿಂದ ಜೊತೆಯಲ್ಲಿಯೇ ಬೆಳೆದ ನಾವಿಬ್ಬರೂ ಏನೋ ಆಕರ್ಷಣೆಗೆ ಬಿದ್ದವರು. ನಮ್ಮಿಬ್ಬರ ವಿಚಾರದಲ್ಲಿ ಅದು ಕೇವಲ ಎಳೆ ವಯಸ್ಸಿನ ಆಕರ್ಷಣೆ ಎಂದರೆ ನಾನು ಒಪ್ಪುವುದಿಲ್ಲ, ಅವನ ಮೇಲೆ ನನಗೆ ಆಕರ್ಷಣೆಯ ಜೊತೆಗೆ ಅದನ್ನೂ ಮೀರಿಸುವ ಪ್ರೀತಿ ಮಮತೆಯಿತ್ತು, ಅವನನ್ನು ನೋಡಿದರೆ ಪ್ರಪಂಚವೇ ತುಂಬಿಕೊಂಡಂತಿತ್ತು. ಆತ ತಿರುಗಿದಂತೆ ನಾನು, ನಾನು ತಿರುಗಿದಂತೆ ಆತ ಗಕ್ಕನೇ ತಿರುಗಿ ತುಟಿಯೊಂದಿಗೆ ಮನಸ್ಸು ಅರಳಿಸಿಬಿಡುತ್ತಿದ್ದೆವು. ಗೆಳೆತನ ಅತಿಯಾದ ಆತ್ಮೀಯತೆಗೆ ತಿರುಗಿದ್ದು ಹೇಳದೇ ಕೇಳದೇ ಪ್ರೇಮವಾಗಿ ಅಂಕುರಿಸಿತ್ತು. ನಾನಿರುವುದು ಸರಿಯಾಗಿ ಬಸ್ಸು ಬರಲಾಗದ, ಕೇರಿ ಕೇರಿಗೊಂದೊಂದು ಜಾತಿಗುಂಪುಗಳು ಕೂಡಿಕೊಂಡಿರುವ, ಪ್ರೇಮಿಗಳನ್ನು ಒಬ್ಬರಿಗೊಬ್ಬರು ಇಟ್ಟುಕೊಂಡಿದ್ದಾರೆ ಎಂದು ಕರೆಯುವ, ಒಂದು ಜಾತಿಯ ಹೊಟೆಲ್ಲಿಗೆ ಮತ್ತೊಂದು ಜಾತಿ ಜನರನ್ನು ಬಿಡದ ಹಳ್ಳಿಯೊಂದರಲ್ಲಿ ಎಂದು ತಿಳಿದಿದ್ದರೂ ಅನ್ಯ ಜಾತಿಯವನಾದ ಆತನನ್ನು ಪ್ರೇಮದಲ್ಲಿ ನನಗೇ ತಿಳಿಯದಂತೆ, ಆಲೋಚನೆಗಳನ್ನು ನಿಯಂತ್ರಿಸಲಾಗದಂತೆ ಆತನ ಮನಸ್ಸಿಗೆ ಒಗ್ಗಿಕೊಂಡಿದ್ದೆ.

ಮುಂದೇನಾಯಿತು? ಆಗುವುದಾದರೂ ಏನು? ಒಂದು ಕಡೆ ಹಗ್ಗ ಕತ್ತಿಗೆ ಸುತ್ತಿ ಕುಳಿತುಕೊಂಡ ಅಮ್ಮ, ವಿಷ ಹುಡುಕಿದ ಅಪ್ಪ, ನಮ್ಮ ಮರ್ಯಾದೆ ಮೂರು ಕಾಸಿಗೆ ಹಂಚುತ್ತಿದ್ದಾಳೆ ಎಂದು ಎದೆ ಹೊಡೆದುಕೊಂಡ ಅಜ್ಜಿ, ರಾಘುವನ್ನು ಕೊಂದೇಬಿಡುತ್ತೇನೆ ಎಂದು ಮಚ್ಚು ಹುಡುಕಿದ ಅಣ್ಣ, ನಿನ್ನನ್ನು ಇಷ್ಟು ಕಷ್ಟಪಟ್ಟು ಬೆಳೆಸಿ ಆ ಜಾತಿಯವನಿಗೆ ಕೊಡುವುದರ ಬದಲು ಕೊಂದೇಬಿಡುತ್ತೇನೆ ಎಂದ ಚಿಕ್ಕಪ್ಪ.

ಇದನ್ನೇ ಕಾಯುತ್ತಿದ್ದ ಕೆಲವರು ಊರಿನಲ್ಲೆಲ್ಲಾ ಗುಲ್ಲೆಬ್ಬಿಸಿ ನಲಿಯುವಾಗ, ಇಡೀ ಊರೇ ನನ್ನ ಮುಖಕ್ಕೆ ಕ್ಯಾಕರಿಸಿ ಉಗಿಯುವಾಗ, ನಾನು ಸತ್ತ ಮನಸ್ಸನ್ನು ಮಣ್ಣು ಮಾಡಿ ಮನೆಯಲ್ಲಿಯೇ ಕುಳಿತುಬಿಟ್ಟೆ. ರಾಘು ಅಪಘಾತವೊಂದರಲ್ಲಿ ತೀರಿಕೊಂಡ ಎಂದು ತಿಳಿದಾಗ ತೀವ್ರ ಖಿನ್ನಳಾಗಿದ್ದೆ. ಆತನನ್ನು ನೆನಪಿಸಿಕೊಂಡು ಎಳೆ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದೆ ಕೂಡ. ಊಟ ತಿಂಡಿ ತಿನ್ನುವುದಕ್ಕೂ ಹಠ ಮಾಡುವ ಸ್ವಭಾವ ಹೆಚ್ಚಾದಾಗ “ನೀ ಮಾಡಿದ್ದು, ನೀನೇ ಅನುಭವಿಸಿ ಸಾಯಿ’ ಎಂದಳು ಅಮ್ಮ. “ಅದಾವ ಜನ್ಮದಲ್ಲಿ ಅದೇನು ಪಾಪ ಮಾಡಿದ್ದರ ಫಲವೋ ನೀನು ಹುಟ್ಟಿದ್ದು’ ಎಂದ ಅಪ್ಪ.

ಮಳೆ ಜೋರಾಯಿತು. ಮುಖಕ್ಕೆ ಎರಚುತ್ತಿದ್ದ ಹನಿ ಮನದೊಳಗೆ ಏನೋ ಸಂತಸ ಉಕ್ಕಿಸುತ್ತಿದ್ದರೂ ಪಕ್ಕ ಕುಳಿತಿದ್ದವರು ಬೇಸರಪಟ್ಟುಕೊಂಡಾರೇನೋ ಎಂದುಕೊಂಡು ಕಿಟಕಿ ಮುಚ್ಚಿದೆ. ಪ್ರಯಾಣದ ನಡುವೆ ನಾನು ತುಂಬಾ ಇಷ್ಟಪಡುವ ಅಣಕೆರೆ ಬೆಟ್ಟದ ಹಸಿರು ತುದಿ, ಇಂದು ಕೈಚಾಚಿ ತನ್ನ ಮಡಿಲಿಗೆ ನನ್ನನ್ನು ಕರೆಯುತ್ತಿದೆ ಎಂದೆನಿಸಿತು.

“ಈಗಿನ ಕಾಲದಲ್ಲಿ ಲವ್ವುಗಿವ್ವು ಅನ್ನೋದೆಲ್ಲಾ ಕಾಮನ್ನು, ತೊಂದರೆ ಏನೂ ಇಲ್ಲ, ನಮ್ಮ ಶಾಮುವಿಗೆ ನಿಮ್ಮ ಮಗಳನ್ನು ತಂದುಕೊಳ್ಳುತ್ತೇನೆ” ಎಂದು ಲಕ್ಷ್ಮತ್ತೆ ಹೇಳಿದಾಗ ನಾನೋ ಬಿರುಗಾಳಿ ಎದ್ದಿದ್ದ ಮನಸ್ಸೊಳಗೆ ನೀರವತೆಯು ತುಂಬಿ ಭಾರಗೊಂಡು ಅತ್ತಿದ್ದೆ. ಮಗಳನ್ನು ತಂದುಕೊಳ್ಳಬಹುದು ಆದರೆ ಮನಸ್ಸನ್ನಲ್ಲ ಎಂದು ಹೇಳುವ ಇಚ್ಚೆಯಾದರೂ ಈ ಮನೆಯಿಂದ, ಈ ಊರಿನಿಂದ, ಹೊರಗೆ ಕಾಲಿಟ್ಟರೆ ಯಾವಾಗಲೂ ಹಂಗಿಸುವ ಈ ಜನರಿಂದ ತಪ್ಪಿಸಿಕೊಳ್ಳುವುದೇ ದೊಡ್ಡ ವಿಚಾರವಾಗಿತ್ತೆನಗೆ.

ಶಾಮು, ನನಗಿಂತ ಒಂದು ತಿಂಗಳಷ್ಟೇ ದೊಡ್ಡವನು. ಇಬ್ಬರೂ ಮದುವೆ ವಯಸ್ಸಿಗೆ ಬರದ ಚಿಕ್ಕವರು. ಕೆಟ್ಟ ಹೆಸರು ಹೊತ್ತುಕೊಂಡ ಮಗಳಿಗೆ ಯಾರಾದರೂ ಸಿಕ್ಕರೆ ಸಾಕು ಎನ್ನುವ ನಮ್ಮ ಮನೆಯವರೊಂದೆಡೆಯಾದರೆ, ಗಂಡನಿಲ್ಲದ ಲಕ್ಷ್ಮತ್ತೆಯ ಒಬ್ಬನೇ ಮಗನಿಗೆ ತ್ವರಿತವಾಗಿ ಮದುವೆಯಾಗಿ ಆಕೆಗೆ ಒಬ್ಬಳು ಸೊಸೆ ಸಿಕ್ಕರೆ ಸಾಕು ಎಂಬಂತಿದ್ದ ಆ ಮನೆಯವರು. ನನ್ನ ಮೇಲೆ ಹೊರಿಸಲಾಗಿದ್ದ ಅಪರಾಧವಲ್ಲದ ಅಪರಾಧವನ್ನು ತಿಳಿದೂ ಶಾಮು ನಗುಮೊಗದಿಂದಲೇ ನನ್ನನ್ನು ಒಪ್ಪಿಕೊಂಡ. ಅಂದೇ ಫೋನಾಯಿಸಿ ಎಲ್ಲಾ ಮರೆತುಬಿಡು ನಾನಿದ್ದೇನೆ ಎಂದು ಹೇಳಿದ್ದು ನನ್ನಲ್ಲಿ ಆತನೆಡೆಗೆ ಹುಟ್ಟಿದ ಮೊದಲ ಗೌರವ. ದಿನವೆಲ್ಲಾ ಹರಟುತ್ತಿದ್ದ, ಅಲ್ಲಲ್ಲಿ ಬಂದ ಹಬ್ಬಗಳಿಗೆ ಒಡವೆ, ವಸ್ತ್ರ ಕೊಡಿಸಿದ್ದ.

ಹಾಸಿಗೆ ಹಿಡಿದಿದ್ದ ಅಮ್ಮನ ಈಗೀಗಿನ ಉತ್ಸಾಹ, ¯ವಲವಿಕೆ ಕಂಡು ನನಗೆ ಖುಷಿಯಾಗಿತ್ತು. ಎಲ್ಲೋ ಒಂದು ಕಡೆ “ಈ ಜೀವನವೆಂದರೆ, ಬದುಕಿರುವ ಕೆಲವೇ ದಿನಗಳಲ್ಲಿ ಸಿಗದಿರುವುದನ್ನು ಅಲ್ಲಲ್ಲಿ ಮರೆತು, ಸಿಕ್ಕಿರುವುದರೊಂದಿಗೆ ನಾಲ್ಕು ದಿನ ಬದುಕಿ ಸಾಯುವುದಲ್ಲವೇ? ಒಂದು ಕಾಲದಲ್ಲಿ ಇದೇ ಅಮ್ಮನನ್ನು ದ್ವೇಷಿಸಿದ್ದೆ, ಈಗ ಎಲ್ಲಾ ಮರೆತು ಅವಳನ್ನು ಮತ್ತೆ ಪ್ರೀತಿಸುವ ಕಾಲ ಬಂದಿದೆ, ಸಾಯುವ ಮುಂಚೆ ಬದುಕನ್ನು ಅಪ್ಪಿಕೊಳ್ಳಬೇಕು” ಎಂದಂದುಕೊಂಡು ಬದಲಾಗಿದ್ದೆ. ಮದುವೆಗೆ ಇದಿರು ನೋಡುತ್ತಿದ್ದೆ.

“ಶಾಮು ವಿಷ ಕುಡಿದುಕೊಂಡನಂತೆ” ಎಂಬ ವಾರ್ತೆ ಕೇಳಿದಾಗ ನಾನು ಮಲಗಿದ್ದಲ್ಲೇ ಒದ್ದಾಡಿದ್ದೆ. ಅದು ಕನಸೆಂಬ ದೃಢ ನಂಬಿಕೆ ನನ್ನದು. ಮನಸ್ಸು ಹಗುರಾಗಿಸಿಕೊಳ್ಳಲು ತೆರೆದುಕೊಳ್ಳದ ಕಣ್ಣನ್ನು ಕಷ್ಟಪಟ್ಟು ತೆರೆದೆ.
“ಯಾವ ಆಸ್ಪತ್ರೆಗೆ ಸೇರಿಸಿದ್ದೀರಿ?” ಎಂದು ಅಪ್ಪ ಯಾರನ್ನೋ ವಿಚಾರಿಸುತ್ತಿದ್ದರು. ಎದೆ ಜೋರಾಗಿ ಹೊಡೆದುಕೊಂಡಿತ್ತು.

ಕಳೆದ ತಿಂಗಳಿನಿಂದ ನಿನ್ನೆಯ ಮುಂಜಾನೆಯವರೆವಿಗೂ ಶಾಮುವಿಗೆ ಫೋನಾಯಿಸುತ್ತಿದ್ದೆ. ಒಮ್ಮೆಯೂ ಮಾತನಾಡದ ಆತ ನಿನ್ನೆ ಲಕ್ಷ್ಮತ್ತೆಯ ಜೊತೆ ಬಂದಿದ್ದ.

“ಮದುವೆ ಮಾಡಿಕೊಳ್ಳಲು ನಮ್ಮ ಬಳಿ ತಾಳಿಗೂ ದುಡ್ಡಿಲ್ಲ, ನೀವೇ ಹಣ ಹೊಂದಿಸಿಕೊಡಬೇಕು” ಎಂದಳು ಲಕ್ಷ್ಮತ್ತೆ.
“ನಾವೇ ಮನೆಪತ್ರ ಅಡವಿಗಿಟ್ಟು ದುಡ್ಡು ತಂದಿದ್ದೇವೆ, ದುಡ್ಡು ಹೊಂದಿಸಲು ಸಾಧ್ಯವಿಲ್ಲ” ಅಪ್ಪ ಖಡಕ್ಕಾಗಿ ಹೇಳಿದ.
ಹತ್ತಾರು ಲಕ್ಷ ಸಾಲ ಮಾಡಿಕೊಂಡಿದ್ದ ಶಾಮು ಸಾಲಗಾರರ ಕಾಟ ತಡೆಯಲಾಗದೆ ನನ್ನನ್ನೂ ಮರೆತು ವಿಷ ಕುಡಿದಿದ್ದ. ದುಡ್ಡಿನ ವಿಚಾರದಲ್ಲಿ ಅಲ್ಲಿ ಜಗಳವೇ ನಡೆಯಿತು. ಮದುವೆಗೆ ಒಂದು ರೂಪಾಯಿಯನ್ನೂ ನಾವು ಖರ್ಚು ಮಾಡಬಾರದು, ಬದಲಾಗಿ ಇರುವ ಸಾಲವನ್ನೂ ಇವರ ಮೇಲೆ ಹೊರಿಸಬೇಕೆಂಬ ಹಠ ಹೊತ್ತು ಬಂದವರಂತೆ ಕಂಡರು. ಹೆಣ್ಣು ಹೆತ್ತವರು ಸೋಲಲೇಬೇಕೆಂಬ ಹಠವೇನು ಹೊಸದಲ್ಲವಲ್ಲ.

“ಇದೇ ರೀತಿಯಾಗಿ ಸಾಲಗಾರರು ಮತ್ತೆ ಮನೆ ಮುಂದೆ ಬಂದು ಜಗಳ ತೆಗೆದರೆ ಮತ್ತೆ ವಿಷ ಕುಡಿಯುತ್ತೇನೆ, ಸ್ವಲ್ಪ ದುಡ್ಡು ಹೊಂದಿಸಿಕೊಡಲು ನಿಮಗೆ ಕಷ್ಟವಾದರೆ ಮದುವೆಯಾಗುವುದು ಕಷ್ಟವಾಗುತ್ತದೆ, ಇನ್ನೊಬ್ಬ ಹುಡುಗನನ್ನು ಪ್ರೀತಿಸಿ ಜೊತೆ ಹೋಗಲು ತಯಾರಿದ್ದವಳನ್ನು ಯಾರು ತಾನೇ ಮದುವೆಯಾಗಲು ಒಪ್ಪುತ್ತಾರೆ” ಎಂಬ ಮಾತು ಶಾಮುವಿನ ಬಾಯಿಂದ ಹೊರಟ್ಟಿದ್ದು ಕಂಡು ಒಮ್ಮೆಲೇ ಸಿಡಿಲು ಬಡಿದಂತಾಯಿತು. ಮನಸ್ಸೆಂಬ ಗೋರಿಯ ಮೇಲೆ ಇತ್ತೀಚೆಗೆ ಚಿಗುರಿದ್ದ ಹಸಿರು ಹಾಗೇ ಒಣಗಿಹೋಯಿತು.

“ಮದುವೆಗಿಂತ ಮುಂಚೆ ಇಷ್ಟೆಲ್ಲಾ ಆಡುವ ತಾವು, ಮದುವೆಯ ನಂತರ ನನ್ನ ಮಗಳ ಸುಖ ಬಯಸುತ್ತೀರಿ ಎಂಬ ನಂಬಿಕೆ ನಮಗಿಲ್ಲ, ನಮ್ಮ ಮಗಳನ್ನೇನು ನಾವು ಬುಟ್ಟಿಯಲ್ಲಿಟ್ಟುಕೊಂಡು ಮಾರುತ್ತಿಲ್ಲ, ಇವನಲ್ಲದಿದ್ದರೇ ಇನ್ನೊಬ್ಬ” ಎಂದಪ್ಪನ ಮಾತಿನ ವರಸೆಗೆ ಲಕ್ಷ್ಮತ್ತೆ ಎದ್ದು ಹೋದಳು. ಬಾಗಿಲ ಬಳಿ ನಿಂತಿದ್ದ ನನ್ನೆಡೆಗೆ ತಿರುಗಿಯೂ ನೋಡದ, ಸುಳಿದಾಡಿದ ಗಾಳಿಯನ್ನೂ ಸೋಕಿಸಿಕೊಳ್ಳದೆ ಶಾಮು ಕೂಡ ಹೊರಟುಬಿಟ್ಟ.


ಅಂದು ಸಂಜೆ
“ಅಪ್ಪ, ಛತ್ರವನ್ನು ಬುಕ್ ಮಾಡಲು ಅಡ್ವಾನ್ಸ್ ಕೇಳುತ್ತಿದ್ದಾರೆ ರಾಯರು” ಎಂದ ಅಣ್ಣ...
“ಮದುವೆ ನಡೆಯುವುದಿಲ್ಲವೆಂದು ಹೇಳಿಬಿಡು” ಎಂದು ಅಪ್ಪ ಹೇಳಿದಾಗ ಹಗ್ಗವನ್ನು ನಾನೇ ಹುಡುಕಿದ್ದೆ. ಸಿಕ್ಕರೂ ಯಾಕೋ ಕೈಗಳು ಹಿಂದೆ ಸರಿದವು.
-
“ಮೇಡಂ, ಆಶ್ರಮ ಬಂದಿದೆ” ಎಂದು ಕಂಡಕ್ಟರ್ ಕೂಗಿಕೊಂಡ. ಇದನ್ನೆಲ್ಲಾ ಯೋಚಿಸುತ್ತಿದ್ದ ನಾನು ಒಮ್ಮೆಲೇ ನಿರಾಳಗೊಂಡಂತೆನಿಸಿ ಕೆಳ ಇಳುಗಿದೆ. “ಸು-ಮನಸ್ವಿ ಆಶ್ರಮ”, ‘ಸಂಬಂಧಗಳು ನಮ್ಮ ಮನಸ್ಸನ್ನು ಕಟ್ಟಿಹಾಕಲೆಂದೇ ಹುಟ್ಟಿಕೊಂಡ ಲೌಕಿಕ ಜಗತ್ತಿನ ಬಂಧನಗಳು, ಬನ್ನಿ ಮನಸ್ಸನ್ನು ಅರಳಿಸಿಕೊಂಡು ಜಗದೊಳಿತಿಗೆ ದುಡಿಯೋಣ” ಎಂಬ ಬೋರ್ಡ್ ಕಂಡಿತು. ಕೆಲ ದಿನಗಳ ಹಿಂದೆ ಪತ್ರಿಕೆಯಲ್ಲಿ ಓದಿದ ಆಶ್ರಮವಿದೇ ಎಂದು ಖಚಿತವಾಯಿತು.

ಆ ಆಶ್ರಮದ ಗೇಟಿನ ಮುಂದೆ ನಿಂತು ಒಮ್ಮೆ ತಿರುಗಿ ನೋಡಿದೆ. ಬಿರುಗಾಳಿ ಮುಖಕ್ಕೆ ರಾಚಿ ಕೂದಲು ಕೆದರಿಕೊಂಡಿತು. ಮುಂದಿದ್ದ ರಸ್ತೆಯಿಂದ ಪ್ರಾರಂಭವಾಗಿ ಕಣ್ಣಿಗೆ ಕಾಣುವವರೆವಿಗೂ ಯಾಕೋ ಅನೇಕ ಬಂಧುಗಳು ಕಣ್ಣೀರು ಸುರಿಸುತ್ತ ಆಶ್ರಮದೆಡೆಗೆ ಕೈ ಚಾಚಿದಂತೆ ಭಾಸವಾಯಿತು. ಅಲ್ಲಲ್ಲಿ ರಕ್ತದ ಕಲೆಗಳು, ನೋವಿನ ಮಚ್ಚೆಗಳು ಕಂಡವು. ಎದೆ ನಿಗುರಿಸಿ ಮೀಸೆ ತಿರುವಿ ಕೊಬ್ಬೇರಿ ಬಬ್ಬಿರದ ಅನೇಕ ಜನಗಳು ಹಲವರನ್ನು ತುಳಿದಿದ್ದರು. ಅಲ್ಲಲ್ಲಿ ಹೊಡೆದುಹೋಗಿದ್ದ ಈ ಪ್ರಪಂಚ ಒಂದು ವೃತ್ತದಂತೆ ಕಂಡು ಬರಲಿಲ್ಲ. ಅದರೊಳಗೆ ಮತ್ತಷ್ಟು ವೃತ್ತಾಂತಗಳು ಕಂಡವು. ಜಾತಿ–ಜಾತಿ, ಕೇರಿ-ಕೇರಿ ನಡುವೆ ಬೆಂಕಿ ತನ್ನ ಕೆನ್ನಾಲಗೆ ಚಾಚಿ ಅದರೊಳಗೆ ಎಷ್ಟೋ ಅಮಾಯಕರು ಸುಟ್ಟು ಕರಕಲಾಗಿಹೋಗಿದ್ದರು. ಎಲುಬುಗಳು ಅತ್ತು ನೂರಾರು ದುರಂತ ಕಥೆ ಹೇಳುತ್ತಿದ್ದವು.

“ಅಮ್ಮಾ...” ಎಂದು ಕೂಗಿಕೊಂಡ ವೃದ್ದನೋರ್ವ ಕೈ ಚಾಚಿದ. ಸಿಮ್ ಕಿತ್ತೆಸೆದು ಕೈಯಲ್ಲಿರುವ ಮೊಬೈಲ್ ಆತನಿಗೆ ನೀಡಿ “ಎಲ್ಲಾದರೂ ಮಾರಿಬಿಟ್ಟು ಏನಾದರೂ ತಿನ್ನು’ ಎಂದು ಹೇಳಿ ಆಶ್ರಮದೊಳಗೆ ನಡೆದೆ.

2 comments:

  1. ಬರವಣಿಗೆಯಲ್ಲಿ ಅದ್ಭುತವಾದ ಹಿಡಿತ ಸಾಧಿಸಿದವರು. ಅದು ಕವಿತೆಯಿರಲಿ,ಕತೆಯಿರಲಿ
    ನಿರೂಪಣೆ ಮನಮುಟ್ಟುತ್ತದೆ. ಸತ್ವಯುತ ಸಾರ!

    ReplyDelete