ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday 17 August 2012

ಒಂದಷ್ಟು ವಿಚಿತ್ರ ವಿದಾಯಗಳು…

ಆ ಟೇಬಲ್ಲಿನ ಮೇಲೆ ಬಿದ್ದ ಕೂದಲು
ಜೊತೆಗಿತ್ತು ಹುಟ್ಟಿದಂದಿನಿಂದಲೂ
ಬೆಳೆದಂತೆ ಕತ್ತರಿಸೊತ್ತರಿಸಿದರು
ತೆಂಗೆಣ್ಣೆ ನುಂಗಿ ನಿಂತಿತ್ತು
ಜೀವ ಭಾವ ಮೀಟಿ
ಬಂದವರೆಲ್ಲ ಪಕಳೆಯಂತುದುರಿದರೂ
ನೆರಳಂತಿದ್ದೆ ನೀ ಜೊತೆಗೆ
ಇಂದನಾಥ ಹೆಣ, ಸೇರು ಸ್ವರ್ಗ

ಹತ್ತತ್ತಿಪ್ಪತ್ತು ಬೆರಳಲ್ಲುಗುರು
ಕತ್ತರಿಸಿದರಳದೆ
ಹುಲುಸಾಗುವ ಚಿಗುರು
ಇಂದು ತುಂಡಂದು ಬುಡ
ಸೇರು ತಂಗಾಳಿಯೆಡೆಗೆ ಗೋಳಿಡಬೇಡ

ಹೇ ಸುಕ್ಕು ತೊಗಲೊಳ ಕೋಶವೇ
ಅಂದು ನಿನ್ನ ಸ್ಪರ್ಶಕ್ಕೆ
ತನು ಆತ್ಮಕಾಯ ಮನ ಪ್ರೇಮಮಯ
ಗೋಣೆತ್ತಿದರೆ ವಸ್ತ್ರ ನೆರಿಗೆ
ಹಣೆಯುದ್ದ ಹರಿದ ದಾರ ಮುಪ್ಪಿಗೆ
ಇದ್ದಷ್ಟು ದಿನ ನಿನ್ನೊಪಿನ ಖುಷಿ
ಹೋಗಿ ಬಾ ಬರಲಿ ಸುಖ ನಿನ್ನರಸಿ

ಒಳ ಇಳಿದ ಜಲ ಬೆವರು ಮೂತ್ರ
ರೈತನುಳುಮೆ ವರ್ಷದ ಹರ್ಷಕ್ಕೆ
ಕಾಳು ಮೊಳೆತೊಡೆದು
ಜೀವ ಬುಗ್ಗೆ ಇಣುಕಿ ಬೆಳೆದು
ಪೈರಾಗಿ ತೊನೆದು ಭತ್ತ ಒಡೆದಕ್ಕಿ
ಅನ್ನವಾಗೆನ್ನುದರ ಸೇರಳಿಯಿತು
ಅಲ್ಲೆಲ್ಲೂ ಕಳೆದುಹೋಗದ ಮುತ್ತು

ಬದುಕು ಬೆದಕಿನೊಂದಿಗಿದ್ದ ಶಕ್ತಿಯೇ
ಯಮ ಬಂದಿಹನು ಯವ್ವನವೇ
ಅಳಿದಳಿದು ಕಳಚಿ ಹೋಗು
ಉಳಿಯಲಿ ಬರಿ ಮುಪ್ಪು
ಹಠ ಮಾಡುವುದು ಲೋಕರೂಢಿ ತಪ್ಪು
ವಿದಾಯ ನಿನಗೆ, ಬರುವೆ ಹಿಂದಿಂದೆ
ಹಳ್ಳ ತೊರೆಗಳಲ್ಲಿ ಸಮುದ್ರ ಕೂಡುವುಪ್ಪು...!

2 comments:

  1. ಆಳವಾದ ವಿಚಾರ ವಿವರಿಸುವ ಕವನ.

    ReplyDelete
  2. ಮೋಹನಣ್ಣ ಈ ಕವಿತೆ ಓದಿದ ನಂತರ ನಿಮ್ಮದೇ ಸಮತೋಲನ ಎಂಬ ಕವಿತೆಯನ್ನು ಓದಿಕೊಂಡೆ.. ಒಬ್ಬ ಕವಿಯ ಸೃಜನಶೀಲತೆ ಕವಿಯ ಯೋಚನೆಗಳನ್ನು ಎಷ್ಟು ಕ್ರಿಯಾಶೀಲವಾಗಿಟ್ಟಿರುತ್ತದೆ ಎಂಬುದಕ್ಕೆ ಉದಾಹರಣೆಗಳಾಗಿ ನಿಲ್ಲಬಲ್ಲ ಮುತ್ತುಗಳಿವೆ ನಿಮ್ಮ ಬತ್ತಳಿಕೆಯಲ್ಲಿ.. ಒಬ್ಬ ಪಕ್ವ ಕವಿಯಿಂದಷ್ಟೆ ಮೂಡಿ ಬರಬಹುದಾದ ಪಡಿಯಚ್ಚು ನಿಮ್ಮ ಕವಿತೆಯ ಪ್ರತಿಮೆಯಾಗಿದೆ.. ಹತ್ತತ್ತು ಸಲ ಓದಿಕೊಳ್ಳುವಷ್ಟು ಸತ್ವಯುತವಾಗಿ ಮೂಡಿ ನಿಂತಿದೆ.. :)

    ReplyDelete